Tuesday, March 21, 2017

⁠⁠⁠ಮಾತ್ರೆ ತೊಗೊಂಡ ಮುಹೂರ್ತವೂ...ಆದ ಅಲರ್ಜಿಯೂ!

                                                     
   
                           ಹೋದ ಸೋಮವಾರ ಬೆಳಿಗ್ಗೆ ಆಸ್ಪತ್ರೆ ತಲುಪಿ ಶಿವಾ ಅಂತ ಪೇಪರ್ ಓದ್ತಾ ಇದ್ನಾ, ಪೇಷೆಂಟ್ ಕಳುಸ್ಲಾ ಮೇಡಂ ಅಂತ ನಮ್ ಅಟೆಂಡರ್ ಬಂದ್ರು, ಕಳುಸ್ರಿ ಅಂತ ಹೇಳೋ ಹೊತ್ಗೆ ಎಲ್ಲೋ ನೋಡಿದಿನಲ್ಲಾ ಅನ್ಸೋ ಒಂದು ಮುಖ ಒಳಗೆ ಬಂತು. 'ಹಾಯ್ ಡಾಕ್ಟರ್, ಥ್ಯಾಂಕ್ ಯೂ ಸೋ ಮಚ್ ಫಾರ್ ಯುವರ್ ಹೆಲ್ಪ್ ದಟ್ ಡೇ' ಅಂದ್ರು. ಅವಾಗ ನೆನ್ಪಾಯ್ತು ಹೋದ ಶನಿವಾರ ಆಸ್ಪತ್ರೆ ಮುಚ್ಚೋ ಹೊತ್ಗೆ ಎದ್ರುಗಡೆ ಬಿಲ್ಡಿಂಗ್ ಅಲ್ಲಿರೋ ವೆಟರಿನರಿ ಡಾಕ್ಟ್ರು ಒಬ್ರಿಗೆ ಅಲರ್ಜಿ ಆಗ್ಬಿಟಿದೆ ಯಾವ್ದೊ ಮಾತ್ರೆ ತೊಗೊಂಡು ಅಂತ ಒಬ್ರು ಆಂಟಿ ಓಡ್ ಬಂದ್ರು. ಹೋಗಿ ಬಿಪಿ ಎಲ್ಲಾ ಚೆಕ್ ಮಾಡಿ ಮಾತ್ರೆ ಕೊಟ್ಟು ಬಂದಿದ್ದೆ. ಈ ಫ್ಲ್ಯಾಷ್ ಬ್ಯಾಕ್ ಆದ್ಮೇಲೆ Thanks ಹೇಳಕ್ಕೆ ಬಂದ್ರೋ ಅಂತ It's OK sir, its my duty ಅಂದೆ.       
                                   ಶುರು ಆಯ್ತು,ಅದೂ ನಾನು ಮುಂಚೆ ಕೂಡ ಆ ಮಾತ್ರೆ ತೊಗೊಂಡಿದೀನಿ, ಈ ಸತಿ ಯಾಕೆ ಹಿಂಗಾಯ್ತೋ? ಅಂತ ಅಂದ್ರು, ನಾನು ಸಮಾಧಾನವಾಗಿ sir ಅದು ಕೆಲವು ಸತಿ delayed hypersensitivity ಇರುತ್ತೆ ಅಂತ ಹೇಳಿದ್ ತಕ್ಷಣ, ಅಯ್ಯೋ ಇಲ್ಲ ಇಲ್ಲ, ಆ ದಿನ ನಾನು ರಾಹುಕಾಲದಲ್ಲಿ ಮಾತ್ರೆ ತೊಗೊಂಡಿದ್ದು ಅದಿಕ್ಕೆ ಹಂಗಾಗಿದ್ದು!!! ಒಂದ್ ನಿಮಿಷ ನಾನು 'ಅ' ಅಂತ ಬಾಯ್ಬಿಟ್ಕೊಂಡು ತಮಾಷೆ ಮಾಡ್ತಿದರೋ ಅಥವಾ ನಿಜ್ಲಾಗ್ಲೂ ಇದು caseಎ ನ ಅಂತ ಯೋಚನೆ ಮಾಡ್ತಿದ್ದೆ.......
ಅದೂ, ನಾನು ಬಹಳ studies ಮಾಡಿದೀನಿ, cosmic medicine ನನ್ subject. ಗ್ರಹಣದ ಟೈಮಲ್ಲಿ ಕಲ್ಚರ್ ಮಾಡುದ್ರೆ ಬೇಕಾಗಿರೋ growth ಬರಲ್ಲ, ಈಗ ನಾನು ಮಾತ್ರೆ ತೊಗೊಂಡಿರೋ ಮುಹೂರ್ತ ಇದ್ಯಲ್ಲ ಅದು ಸರಿ ಇರ್ಲಿಲ್ಲ!!!
ನಿಮ್ date of birth ಹೇಳುದ್ರೆ ನಿಮ್ ಬಗ್ಗೆನೂ I ll tell few interesting things ಅಂತ ಹೇಳುದ್ರು, ನಾನು ಎಲ್ಲಿ ಬಚ್ಚಿಟ್ಕೊಂಡು ನಗಬೇಕೋ ಗೊತ್ತಾಗ್ದೇ ನಿಮ್ officeಗೆ ಬರ್ತೀನಿ ಸಾರ್ thank you ಅಂತ ಹೇಳಿ ಈ ರಾಹುಕಾಲದ ಮಾತ್ರೆ ಡೋಸ್ ಕೇಳಿ ದಂಗಾದೆ!!!                       

Thursday, April 30, 2015

ನಡೆದು ಬಂದ ಹೆಜ್ಜೆಗಳ ನೆನೆದು..


ಹೇ..ಅದು ನಮ್ ಶಾಲೆ ! ದಾರೀಲಿ ಹೋಗುವಾಗ ಜೊತೇಲಿ ಇರೋರಿಗೆ ಹೆಮ್ಮೆಯಿಂದ ಗ್ಯಾರಂಟಿ ಹೇಳ್ಕೊಂಡಿರ್ತೀರ..ಒಂದೇ ಶಾಲೇಲಿ ಜೊತೆಗೆ ಓದ್ತಿದ್ದ ಸ್ನೇಹಿತ್ರು ಸಿಕ್ಕಿದ್ರಂತೂ ಮುಗೀತು ಕಥೆ, ನಮ್ಮ್ ಹರಟೆಗೆ ಆರಂಭನೂ ಇರೋಲ್ಲ, ಅಂತ್ಯಾನು ಬೇಕಾಗಿರೋಲ್ಲ.ಶಾಲೆ ಬಗ್ಗೆ ಒಬ್ಬೊಬ್ರಿಗೂ ಒಂದೊಂದು ನೆನಪು. ಬೆಳಿಗ್ಗೆ ಹೇಳ್ತಿದ್ದ ಮಾರುದ್ದದ ಪ್ರಾರ್ಥನೆ,ಶಾಲೆಗೆ ಹೋಗ್ತಾ ಬಸ್ಸಿನಲ್ಲಿ ಕಿಟಕಿ ಪಕ್ಕದ ಸೀಟ್ ಗೋಸ್ಕರ ಎಷ್ಟೋ ಜನರ ಜೊತೆ  ಕಿತ್ತಾಡಿದ್ದು, ಶೂ ಪಾಲಿಶ್, ಉಗುರು ಕಟ್ ಮಾಡಿದರೋ ಇಲ್ವೋ, ತಲೆ ನೀಟಾಗಿ ಬಾಚಿದ್ಯೋ ಇಲ್ವೋ ಅಂತ ಚೆಕ್ ಮಾಡೋಕ್ಕೆ ಇರ್ತಿದ್ದ ನಮ್ಮ ಶತ್ರು ಲೀಡರ್ ಗಳ ಮೇಲಿನ ಕೋಪ.... ಯಾರ್ಯಾರು ಏನೇನು ತರ್ಲೆ ಮಾಡಿ ಸಿಕ್ಕಾಕೊಂಡಿದ್ದು, ಯಾರು ಯಾವ್ ಸರ್ ಹತ್ರ ಹೊಡೆಸ್ಕೊಂಡಿದ್ರು..ಒಳ್ಳೊಳ್ಳೆ ಶಿಕ್ಷೆಗಳು ಯಾರ್ಯಾರಿಗ್ ಸಿಕ್ಕಿದ್ವು,ಲಂಚ್ ಬ್ರೇಕ್ ಟೈಮಿನಲ್ಲಿ ಎಲ್ಲಾ ಒಟ್ಟಿಗೆ ಕೂತ್ಕೊಂಡು ಊಟ ಮಾಡ್ತಾ ಇದ್ದದ್ದು..ಮೆಟ್ಟಲುಗಳ ಮೇಲೆ ಕೂತು ಹರಟೆ ಹೊಡೀತಿದಿದ್ದು.....ವಾರಕ್ಕೆ ಒಂದೇ ಸತಿ ಬರ್ತಿದ್ದ ಪಿಟಿ ಪಿರಿಯಡ್ ಗೆ ಕಾಯ್ತಾಯಿದ್ದದ್ದು..ಸ್ಪೋರ್ಟ್ಸ್ ಡೇ, ಶಾಲೆ ವಾರ್ಷಿಕೋತ್ಸವ ಬಂತಂದ್ರೆ ಕ್ಲಾಸ್ ಇರಲ್ಲ ಅನ್ನೋ ಖುಷೀಲಿ ಒಂದ್ ತಿಂಗಳು ಮಜಾ ಮಾಡ್ತಿದಿದ್ದು.ಯಾವ್ ಮೇಡಂ ಚೆನ್ನಾಗ್ ರೆಡಿ ಆಗಿ ಬರ್ತಿದ್ರು ..ಯಾವ್ ಸರ್ ತಮಾಷೆಯಾಗಿ ಮಾತಾಡ್ತಿದ್ರು... ಹೀಗೆ ನಮ್ಮ್ ಶಾಲೆಯ ಆಯಮ್ಮ, ಟೀಚರ್ಸ್, ಹೆಡ್ ಮಾಸ್ಟರ್, ನಮ್ಮ ಕ್ಲಾಸ್, ನಾವು ಕೂತ್ಕೋತಿದ್ದ ಬೆಂಚ್, ಎಲ್ಲವನ್ನು ನೆನಪು ಮಾಡ್ಕೊಂಡು ಸಾಗುವ ನಮ್ಮ ಹರಟೆ ಸಮಯದ ಪರಿವೆ ಇಲ್ದೇ ನಡೆಯುತ್ತೆ.  ಈ ರೀತಿ ಬಾಲ್ಯದ ಶಾಲೆಯ ದಿನಗಳಲ್ಲಿ ನಾವ್ ಮಾಡಿದ್ದ ತಪ್ಪು, ತಲೆಹರಟೆಗಳನ್ನು, ಮಾಡಿದ ಅವಾಂತರಗಳನ್ನ ಬಾಲ್ಯದ ಸ್ನೇಹಿತರೊಂದಿಗೆ ನೆನಪಿಸ್ಕೊಂಡು ಹರಟೋದುತುಂಬಾನೇ ಮಜಾ ಕೊಡುತ್ತೆ ಅಲ್ವಾ?!!! ಆಮೇಲೆ, ಈಗ 100 ಕೆಜಿ ಆಗಿರೋನು ಆಗ ಶಾಲೇಲಿ ನೋಡ್ದಾಗ ಸೊಣಕಲು ಸೌತೇಕಾಯಿ ಥರ ಇದ್ದ ನೆನಪು, ಆಗ ತಲೆಗೆ ಎಣ್ಣೆ ಹಾಕ್ಕೊಂಡು ಎರಡು ಬದನೆಕಾಯಿ ಜಡೆ ಹಾಕೊತಿದ್ದವ್ಳು ಈಗ ಸಖತ್ ಮಾಡೆಲ್ ಆಗಿರ್ತಾಳಂತೆ, ಅನ್ನುವ ಈಗಿನ ಅಂತೆ-ಕಂತೆಗಳು....ಉಫ್!!! ನೋಡಿ, ಶಾಲೆ ಅಂದ ಕೂಡಲೇ ಎಷ್ಟೆಲ್ಲಾ ನೆನಪುಗಳು, ಖುಷಿ, ಉತ್ಸಾಹ.  ಶಾಲೆಯ ನೆನಪುಗಳು ಅಕ್ಷಯ ಪಾತ್ರೆ ಇದ್ದ ಹಾಗೆ.  ಎಷ್ಟೆಲ್ಲಾ ಮಾತಾಡಿದರೂ ಯಾವತ್ತಿಗೂ ಮುಗಿಯದ, ಮಾಸಿಹೋಗದ, ಸದಾ ಕಚಗುಳಿಯಿಡುವ ನೆನಪುಗಳು.
ಹೌದು, ಒಂದು ಘಳಿಗೆ ನಾವ್ ಓದಿದ್ ಶಾಲೆ ಬಗ್ಗೆ ಯೋಚಿಸಿದ್ರೆ, 20-30 ವರ್ಷಗಳ
ಹಿಂದೆ ನಡ್ದಿರೋ ಇಷ್ಟೊಂದೆಲ್ಲಾ ವಿಷ್ಯಗಳು ಹೇಗೆ ಏಕಾಏಕಿ ನೆನಪಾಗ್ತವೆ?
ಯಾಕೆ ಅಂದ್ರೆ ಅವು ನಮ್ಮೆಲ್ಲರ ಜೀವನದಲ್ಲೂ ಅತ್ಯಮೂಲ್ಯ ದಿನಗಳು..ಈಗ ಶಾಲೆ ಮುಗ್ಸಿರೋ ಹುಡ್ಗ ಆಗಿರ್ಲಿ..ಇನ್ನೇನು ರಿಟೈರ್ ಆಗ್ತಿರೋರ್ ಆಗ್ಲಿ, ಎಲ್ಲರಿಗೂ ಶಾಲೆ ಅಂದ್ರೆ ಈ ಕೃತಜ್ಞ ಭಾವ! ’Student / School Life is Golden Life’ ಅನ್ನುವ ಮಾತಿನ ಅರ್ಥ ನಮಗೆ ಅವತ್ತಿಗಿಂತ ಇವತ್ತಿಗೆ ಹೆಚ್ಚು ಅರ್ಥ ಆಗುತ್ತೆ.
ಇವತ್ತು ನಾವು ಪೆನ್ ಹಿಡಿದು ಪುಟಗಟ್ಟಲೆ ಬರೆಯೋ ಆತ್ಮವಿಶ್ವಾಸ ಬಂದಿದ್ದು ಶಾಲೇಲಿ ಸ್ಲೇಟು ಬಳಪ ಕೊಟ್ಟು ನಮ್ಮನ್ನ ತಿದ್ದಿದಕ್ಕೆ..ಮಗ್ಗಿ ಹೇಳ್ದೆ ಇದ್ರೆ ಕೊಡ್ತಿದಿದ್ ಚಡಿಯೇಟಿಂದಾನೇ ಇವತ್ತು ನಮ್ಮಲ್ಲಿ ಎಷ್ಟೊಂದ್ ಜನ ಇಂಜಿನಿಯರ್ರು, ಡಾಕ್ಟ್ರು, ಲಾಯರ್ ಗಳಾಗಿದ್ದಾರೆ..ನೀವ್ ಯಾವ್ದೇ ಒಳ್ಳೆ ಕೆಲಸ ಮಾಡಿ, ಆ ಸಂಸ್ಕಾರ ನಿಮಿಗೆಲ್ಲಿಂದ ಬಂತು ಅಂತ ತಿಳಿದುಕೊಳ್ಳುವುದಕ್ಕೆ ‘ನೀವ್ ಯಾವ್ ಶಾಲೇಲಿ ಓದಿದ್ದು?’ ಅಂತ ಯಾರಾದ್ರೂ ಕೇಳೆ ಕೇಳ್ತಾರೆ..ನಮ್ಮ ಅಕ್ಷರ ಕಲಿಕೆಗೆ ಸೂರಾದ, ಜ್ಣಾನದ ಬೆಳವಣಿಗೆಗೆ ಅಡಿಪಾಯವಾದ, ನಮ್ಮನ್ನು ಇಷ್ಟು ಬೆಳೆಸಿರೋ ಶಾಲೆಗೆ ಹೋಗುವುದಕ್ಕೆ“ಈಗ ಟೈಮೇ ಸಿಗಲ್ಲ ಕಣ್ರೀ” ಅಂತ ನೆಪ ಕೊಡುತ್ತೇವೆ.  ಅದು ಎಲ್ಲೇ ಇರುವ ಶಾಲೆಯಾಗಿರಬಹುದು; ಇದೇ ಸಿಟಿಯಲ್ಲಿರುವ ಶಾಲೆಯಾಗಿರಬಹುದು, ನೀವು ಹುಟ್ಟಿ-ಬೆಳೆದ ಹಳ್ಳಿಯಲ್ಲಿನ ಶಾಲೆಯಾಗಿರಬಹುದು, ನಮಗೆ ಶಾಲೆಗೆ ಹೋಗಲು ಈಗ ಸಮಯವೇ ಇಲ್ಲ ಅನ್ನುವ ಕುಂಟು ನೆಪ ಸದಾ ಸಿದ್ದವಾಗಿರುತ್ತದೆ.ಬದಲಿಗೆ, 365 ದಿನದಲ್ಲಿ ಒಂದೇ ಒಂದು ದಿನ, ನೀವು ಓದಿದಶಾಲೆಗೆ ಹೋಗಿ, ನೀವು ಓದಿದ ಕ್ಲಾಸ್ ರೂಂ ಅಲ್ಲೇ ಈಗ ಕಲೀತಿರೋ ಮಕ್ಕಳಿಗೆ ಅವ್ರೂ ನಿಮ್ಮ ಥರ ಹಳ್ಳಿ ಶಾಲೇಲೇ ಓದಿ ಮುಂದೆ ಬರಬಹುದು ಅನ್ನೋ ವಿಶ್ವಾಸ ತುಂಬಿ ಅವರ ವಿದ್ಯಾಭ್ಯಾಸಕ್ಕೆ ಬೇಕಾದ ಪುಸ್ತಕಗಳನ್ನ ಅಥವಾ ಇನ್ನಾವುದೇ ಸಹಾಯವನ್ನು ನೀಡುವ ಕಾರ್ಯ ನಿಮ್ಮಲ್ಲಿ ಮೂಡಿಸುವ ಆ ಸಾರ್ಥಕ ಭಾವ, ನಿಮ್ಮ ಮನಸಲ್ಲಿ ನಿಮ್ಮ ಶಾಲೆ ನೆನಪನ್ನ ಇನ್ನೂ ಹಸಿರಾಗಿಸುತ್ತೆ..!
ನಿಮ್ಮ ಶಿಕ್ಷಕರಿಗಂತೂ ಇದು ಹೆಮ್ಮೆಯ ಸಂಗತಿಯೇ..”ನನ್ ಸ್ಟೂಡೆಂಟ್ ಈಗ ನಮ್ ಶಾಲೆ ಮಕ್ಕಳಿಗೆ ಸಹಾಯ ಮಾಡುವಷ್ಟು ಎತ್ತರಕ್ಕೆ ಬೆಳೆದಿದ್ದಾನೆ” ಅಂತ. ನಮ್ಮ ದುಡಿಮೆಯ ಅಥವಾ ಉಳಿತಾಯದ ಒಂದು ಸಣ್ಣ ಭಾಗವಾದರೂ ಹೀಗೆ ನಮ್ಮ ಶಾಲೆಗೆ ಉಪಯೋಗವಾದರೆ ಅದು ಹಳ್ಳಿಗಾಡಿನ ಮಕ್ಕಳಿಗೆ ದೊಡ್ಡ ಪಾಲು, ಅಲ್ಲವೇ?
’ಇದೆಲ್ಲಾ ಆಗುವ ಕೆಲಸಾನ?”  “ಹೇಗೆ ಶುರು ಮಾಡ್ಬೇಕು?” “ಏನು ಮಾಡ್ಬೇಕು?” ಅಂತಾ ಯೋಚಿಸುತ್ತಾ ನೀವು ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ.  ಈ ಕೆಲಸ ಖಂಡಿತವಾಗಿಯೂ ನಿಮ್ಮಿಂದ ಸಾಧ್ಯ.  ಇದನ್ನು ನಿಮ್ಮಿಂದಲೇ ಸಾಧ್ಯವಾಗಿಸೋಕೆ ’ಅವಿರತ ಸಂಸ್ಥೆ’ ನಿಮ್ಮ ಜೊತೆ ಇದೆ. ಈಗಾಗಲೇ ಕರ್ನಾಟಕದಾದ್ಯಂತ, ನೂರಾರು ಶಾಲೆಗಳಲ್ಲಿ, ಸಾವಿರಾರು ವಿದ್ಯಾರ್ಥಿಗಳಿಗೆ, ಲಕ್ಷಾಂತರ ನೋಟ್ ಪುಸ್ತಗಳನ್ನು ಪ್ರತಿವರ್ಷ ಈ ಸಂಸ್ಥೆ ವಿತರಿಸುತ್ತಿದೆ.ಇವರು ನೇರವಾಗಿ ಮುದ್ರಕರಿಂದಲೇ ಪುಸ್ತಕಗಳನ್ನ ಖರೀದಿಸುವುದರಿಂದ ಶೇಕಡ 50% ರಷ್ಟು ಕಡಿಮೆ ಬೆಲೆಗೆಒಳ್ಳೆ ದರ್ಜೆಯ ಪುಸ್ತಕಗಳೇ ಸಿಗುತ್ತವೆ.  ನೋಟ್ ಪುಸ್ತಕಗಳನ್ನು ವಿತರಿಸಲು ಈ ಸಂಸ್ಥೆ ವೈಜ್ಣಾನಿಕ ಮಾರ್ಗವನ್ನೇ ಅನುಸರಿಸುತ್ತಿದೆ ಎಂಬುದು ಗಮನಾರ್ಹ ಅಂಶ.

ಇಂದು, ನೀವು ನಿರ್ಭಯರಾಗಿ ಸಮಾಜದ, ಸಮುದಾಯದ ಮುಂದೆ
ಒಂದು ಶಾಲೆ ಸಮಾಜದ ಅತಿ ಕಿರಿಯ ಅಂಶ. ನೀವೂ ನಿಮ್ ಶಾಲೆ ನ ಮರೀಬೇಡಿ,
ಅವಿರತದ ಜೊತೆ ಕೈ ಜೋಡಿಸಿ..!
ಶಾಲೆ ಎಂದರೆ ಕೇವಲ ಕಾಂಪೌಂಡು, ಗೋಡೆ, ಕಿಟಕಿ, ಬಾಗಿಲು, ಬೋರ್ಡ್, ಬೆಂಚು, ಬೆಲ್ಲು ಇರುವ ಕಟ್ಟಡವಷ್ಟೇ ಅಲ್ಲ. ಮೊದಲಿಗೆ ಅದೊಂದು ವಾತಾವರಣ, ಆಮೇಲೆ ಅನುಭವ, ಅನಂತರ ಅಚ್ಚಳಿಯದ ನೆನಪು.  ತಂದೆ-ತಾಯಿ, ಕುಟುಂಬದ ಹೊರತಾಗಿ ಈ ಅಪರಿಚಿತ ಸಮಾಜವನ್ನು ಪ್ರತಿಯೊಬ್ಬಮಗುವು ಎದುರುಗೊಳ್ಳುವುದು ಮೊದಲಿಗೆ ಶಾಲೆಯಲ್ಲಿಯೇ!!  ಇಂದು, ನೀವು ಸಹ ಸಮಾಜದ ಭಾಗ.  ಈ ಸಮಾಜದೊಳಗಿನ ನಾಗರಿಕರಾಗಲು ಅ, ಆ, ಇ, ಈ ಕಲಿಸಿದ ನಿಮ್ಮ ಶಾಲೆಯನ್ನ ನೀವು ಮರೆಯಬೇಡಿ.
ಬನ್ನಿ, ಅವಿರತ ಸಂಸ್ಥೆಯ ಜೊತೆಗೂಡಿ, ನಡೆದು ಬಂದ ದಾರಿಯ ನೆನೆಯಿರಿ….!! 

COP ಕೈವಾರ..:)


ಹೊಸ ವರುಷದಿ ಹೊಸ ಹರುಷವ ತರಲು ನಾವೆಲ್ಲರೂ ಕೈವಾರಕ್ಕೆ ಹೊರಡಲು..
ಹೋಗಿ ಬರುವೆವೆಂದು ಗಂಟು ಮೂಟೆ ಕಟ್ಟಿಕೊಂಡು ಹೊರಟೆವು
ಸಂತಸದಿ ಶ್ರೀ ಕ್ಷೇತ್ರ ಕೈವಾರವ ತಲುಪಿ,
ಮನಸೋತೆವು ಯೋಗಿನಾರಾಯಣ ಆಶ್ರಮದ ಪ್ರಶಾಂತತೆ ಕಂಡು
ಊರ ಮುಖಂಡರು ಜೊತೆ ಮಾತುಕಥೆಗಳು,,ರುಚಿರುಚಿಯಾದ ಊಟ ತಿಂಡಿಗಳು
ನಾಳೆಗೆ briefingಗಳು ..ಇವತ್ತಿನ debriefingಗಳು
ಎಲ್ರಿಗೂ ಕೊಟ್ರು IDcardಗಳು..ಎಲ್ರಿಗೂ social mapping ಬಗ್ಗೆ classuಗಳು!

ಮರುದಿನ ಹೊರಟೆವು ನಮ್ಮ ಹಳ್ಳಿಗೆ..ಏಳು ಹಳ್ಳಿಗಳಲ್ಲಿ ದೊಡ್ಡದಾದ ಹುಲುಗುಮ್ಮನಹಳ್ಳಿಗೆ !
300 ಮನೆಗಳು..1400 ಜನಗಳು..3 ಬೋರ್ವೆಲ್ಲುಗಳು..2 ನೀರಿನ tankಗಳು
ದಿನಕ್ಕೆ 6 ಗಂಟೆಗಳು ಮಾತ್ರ ಕೊಡ್ತಾರಂತೆ ಕರೆಂಟು ..
ಆದರು election ಟೈಮ್ ಅಲ್ಲಿ ಮೊದ್ಲು ಕೇಳಕ್ ಬರ್ತಾರೆ ವೋಟು!!!
ಬೆಳೀತಾರೆ ತರಕಾರಿಗಳು ..ಇಲ್ಲಿ ಹೈನುಗಾರಿಕೆಗೆ ಸಿಗುತ್ತೆ ಒಳ್ಳೆ ರೇಟು..
ಮುಖ್ಯ ಬೆಳೆಗಳು-ರಾಗಿ ಜೋಳ ಸಾಸಿವೆ ಎಳ್ಳು ಅಳಸಂದೆ...
ಬೆಳಿಗ್ಗೆ ಮಧ್ಯಾಹ್ನ ರಾತ್ರಿ – ಮೂರು ಹೊತ್ತೂ ರಾಗಿ ಮುದ್ದೆ
ರೇಷಿಮೆಯೇ ಇಲ್ಲಿನ ಹಿರಿಮೆ..9 ಮಹಿಳಾ ಸಂಘಗಳುಂಟು ಇನ್ನೇನು ಕಡಿಮೆ !
ಉಂಟು ಒಂದು ಊರಿನ ಚಾವಡಿ ..ಶಾಲೆಯ ಮಡಿಲಲ್ಲೇ ಅಂಗನವಾಡಿ !

ಹಳ್ಳಿಗೆಲ್ಲಾ ಹಂಚುದ್ವಿ Health campನ ಚೀಟಿಗಳು ..
ಹಿರಿಯರು ಮಕ್ಕಳು ಸ್ಕೂಲ್ ಗೆ ಬಂದು social mapಗಾಗಿ ಬಿಡಿಸಿದರು ಹಳ್ಳಿಯ ಚಿತ್ರಗಳು !
ತಪಾಸಣ ಶಿಬಿರಕ್ಕೆ ಹೊರುಟ್ವಿ ಸಂಜೆ ಹೇಮಂತ್ ಸರ್ ಜೊತೆ  
ಹಳ್ಳಿ ಮನೆಗಳ್ಗೆ ಹೋಗಿ ಹೇಳಿ ಬಂದ್ವಿ ಮತ್ತೆ ಮತ್ತೆ
ಅಜ್ಜಿ ತಾತ ಅಪ್ಪ ಅಮ್ಮ ಮನೆ ಮಂದಿಯೆಲ್ಲ ಬಂದ್ರು ಡಾಕ್ಟ್ರು ನೋಡಕ್ಕೆ
ಮಾತ್ರೆಗಳು ಔಷಧಿಗಳು ತೊಗೊಂಡ್ ಬಂದಿದ್ವಿ ಅವ್ರಿಗ್ ಕೊಡಕ್ಕೆ

ಮೂರನೇ ದಿನ ಹಳ್ಳಿಗೆ ಹೊರುಟ್ವಿ Family studyಗೆ ..5ಗುಂಪುಗಳ್ ಮಾಡಿ ಒಂದೊಂದ್ ಗುಂಪು ಎರಡು ಮನೆಗೆ
ಗಾಳಿ.. ನೀರು.. ಬೆಳಕು ಸರಿಯಾಗಿದ್ಯ ನೋಡುದ್ವಿ.,ಸಮಸ್ಯೆಗಳು ತಿಳ್ಕೊಂಡ್ವಿ...
ಪ್ರಾಥಮಿಕ ಆರೋಗ್ಯ ಕೇಂದ್ರ ನೋಡಕ್ಕೆ ಕೈವಾರಕ್ಕೆ ಬಂದ್ವಿ..
ಊಟ ಆದ್ಮೇಲೆ ಹೋದ್ವಿ Deflouridation plant ನೋಡಕ್ಕೆ..
ಅರ್ಜುನ್ ಸರ್ ಹೇಳ್ಕೊಟ್ರು ಏನು ಯಾಕೆ ಎತ್ತ ಈ plant ಬಗ್ಗೆ
ಉಪ್ಪು ನೀರು ಒಳಗೋಗಿ ಸಿಹಿನೀರು ಆಚೆ ಬರತ್ತೆ..
ಅದಕ್ಕೆ ಅರ್ಜುನ್ ಸರ್ ಗೆ Hatsoff ಹೇಳ್ಬೇಕು ನಾವು ಮತ್ತೆ ಮತ್ತೆ

ನಾಲ್ಕನೇ ದಿನ ಹಳ್ಳಿ ಶಾಲೆಗ್ ಬಂದ್ವಿ Health checkup ಮಾಡಕ್ಕೆ..
ಮೊದ್ಲು ಒಬ್ರು ಹೆಸರು ವಯಸ್ಸು ಕೇಳಕ್ಕೆ..ಆಮೇಲೆ ಒಬ್ರು heightu weightu ನೋಡಕ್ಕೆ..
ಮಕ್ಕಳೆಲ್ಲಾ ಸಾಲಾಗಿ ಬಂದು ಕಣ್ಣು ಪರೀಕ್ಷೆ ಮಾಡಿಸಿ...ಹಲ್ಲುಗಳು ಪರೀಕ್ಷೆ ನು ಮುಗೀತು
ಮಕ್ಕಳು ಮಾಡಿದ್ರು ಪಂಚಭಾಷಾವಂದನೆ..ನಾವೂ ಮಾಡುದ್ವಿ ಅನುಕರಣೆ !
ಐದನೇ ದಿನ ಅಂಗನವಾಡಿಗೆ ಕರ್ಕೊಂಡು ಹೋದ್ರು
ಎಲ್ಲಾ ಮನೆಗಳ್ಗು ಹಾಕೊಂಡ್ ಬಂದ್ವಿ ನಂಬರ್ರು..
ಊರು ಕೇರಿ ಸುತ್ತಿದ್ ಅನುಭವ ಸೂಪರ್ರು!

ಆರನೇ ದಿನ ಬಂತು Community Education Programmeu...
ಕಥೆಗಳು, scriptಗಳು, ಡೈಲಾಗುಗಳು, ಹಾಡುಗಳು, danceಗಳು..
ತಲುಪಿದೆವು ಹಳ್ಳಿಗೆ ..ಆಮಂತ್ರಣ ಕೊಟ್ಟೆವು ಎಲ್ಲರಿಗೆ...
ಕಾರ್ಯಕ್ರಮ ಶುರು ಮಾಡುದ್ವಿ ಪ್ರಾರ್ಥನೆ ಮಾಡಿ..
ನಾವ್ ಮಾಡಿದ್ 5 ನಾಟಕಗಳು ..ಶಿಳ್ಳೆಗಳು ಕೂಗಾಟಗಳು ..ಕೊನೆಗೂ ದಕ್ಕಿದ ಚಪ್ಪಾಳೆಗಳು!!
ನಾವ್ ಆದ್ವಿ ಹುಲುಗುಮ್ಮನಹಳ್ಳಿ ಹುಲಿಗಳು

ಬಂದೇ ಬಿಡ್ತು ಶ್ರಮದಾನದ ದಿನ..ಭರ್ಜರಿ ತಯ್ಯಾರಿ ನಡೆಸಿದ್ವಿ ಹಿಂದಿನ ದಿನ..
Anti Tobacco Rally ನಡೆಸಿದ್ವಿ ಊರು ತುಂಬಾ..chartಗಳು sloganಗಳು...ತುಂಬಾ ತುಂಬಾ
ಗಂಟೆಗೊಂದು ಸಿಗರೇಟು,ನರಕಕ್ಕೆ ಟಿಕೆಟು !!!
Water tank ಕ್ಲೀನ್ ಮಾಡುದ್ವಿ ಎಲ್ರೂ ಕಷ್ಟಪಟ್ಟು..ಎಲ್ಲಾರ್ಗೂ ಅರ್ಥ ಆಯ್ತು ಒಗ್ಗಟ್ಟಿನಲ್ಲಿ ಬಲವುಂಟು!
Forms ತೊಗೊಂಡು ಹೊರುತ್ವಿ Survey ಮಾಡಕ್ಕೆ ..ಕೆಲಸ ಮುಗ್ಸೊದ್ರಲ್ಲಿ ಸುಸ್ತಾಯ್ತು ಸಿಕ್ಕಾಪಟ್ಟೆ !!

ಹುಲುಗುಮ್ಮನಹಳ್ಳಿ ಹುಲಿಗಳು ..ಗುಟ್ಟಹಳ್ಳಿ ಗಂಡುಗಲಿಗಳು
ಭೂರಗಮಾಕಳಹಳ್ಳಿ ಭೂಪರು..ಕೆಂಪದೇನಹಳ್ಳಿ ಕುವರರು
ದೊಡ್ಡಾಟ ಆಡಲು ಬಂದ ದೊಡ್ಡಕೊಂಡರಹಳ್ಳಿಯವರು
ದೊಡ್ಡ ದೊಡ್ಡ ಕನಸು ಕಟ್ಟಿದ ಚಿಕ್ಕಕೊಂಡರಹಳ್ಳಿಯವರು
ಕೊನೆಗೆ ಬಂದ ಬಿ ವಡ್ಡರಹಳ್ಳಿಯವರು...
ಸ್ನೇಹಿತರೆಲ್ಲರ ಪರವಾಗಿ ಈ ಕಾರ್ಯಕ್ರಮದ ಮೂಲಕ, ಪುಸ್ತದಲ್ಲಿರದ ನೂರಾರು ಮಾನವೀಯ ಮೌಲ್ಯಗಳನ್ನು ನಮ್ಮಲ್ಲಿ ತುಂಬಿ ನಮ್ಮ ಸಾಮಾಜಿಕ ಜವಾಬ್ದಾರಿಗೆ ನಾಂದಿ ಹಾಡಿದ ಎಲ್ಲಾ ಶಿಕ್ಷರಿಗೂ, ಪ್ರಾಂಶುಪಾಲರಿಗೂ ಹೃತ್ಪೂರ್ವಕ ಅಭಿನಂದನೆಗಳು!

Wednesday, April 29, 2015

ದಾರಿಗಚ್ಚಿದ ದೀಪ ಇವಳು..!



ಕೆ.ವೈ.ಎನ್ ಮೇಷ್ಟ್ರು ಬರೆದ ಈ ಸಾಲು ಬಹಳ ದಿನಗಳಿಂದ ನನ್ನನ್ನು ಕಾಡುತಿತ್ತು. ಮೊದಲ ಬಾರಿಗೆ, ೨೦೧೩ ರಲ್ಲಿ ನಾವು ನಮ್ಮ ಅವಿರತ ತಂಡದಿಂದ ಮಲೆಗಳಲ್ಲಿ ಮದುಮಗಳು ನಾಟಕವನ್ನು ನೋಡಲು ಹೋದಾಗ ಕೇಳಿದ ಈ ಹಾಡು, ಹಾಡಿನ ಸಾಲುಗಳು ಇವತ್ತಿಗೂ ನನ್ನನ್ನು ಬಿಡದೆ ಆವರಿಸಿದೆ.

      ಬರುವೆನೆಂದ ನಲ್ಲ...ಬರದೆ ಹೋದನಲ್ಲ...
      ಬೆಂದು ಹಗಲು..ಬೆಂದು ಹಗಲು
      ನೊಂದು ಇರುಳು..ನೊಂದು ಇರುಳು
      ದಾರಿಗಚ್ಚಿದ ದೀಪ ಇವಳು...!
      ಕನಸೇ ಕನಿಕರಿಸು..ಸುಖವೇ ಮರುಕಳಿಸು...
      ಒಮ್ಮೆ ಅವನ ತೋರಿಸು...ಒಮ್ಮೆ ಅವನ ಮರಳಿಸು
      ಗಾಳಿ ಏಕೆ ನಿಂದಿರುವೆ..ಎತ್ತನಿಂದ ಬಂದಿರುವೆ?
      ಏನು ಸುದ್ದಿ ತಂದಿರುವೆ..ನುಡಿ ಬಾರದೆ ತೊದಲಿರುವ
      ದಾರಿಗಚ್ಚಿದ ದೀಪ ಇವಳು....!

ಬರದೆ ಹೋದ ನಲ್ಲನಿಗಾಗಿ ಹಗಲಲ್ಲಿ ಬೆಂದು ಇರುಳಲ್ಲಿ ನೊಂದವಳು ರಂಗಮ್ಮ ಹೆಗ್ಗಡತಿ; ಸುಬ್ಬಣ್ಣ ಹೆಗ್ಗಡೆಯವರ ಹಿರಿಯಮಗ ದೊಡ್ಡಣ್ಣ ಹೆಗ್ಗಡೆಯ ಹೆಂಡತಿ. ನಾಟಕ ನೋಡಿದಾಗ ಗಾಯಕಿ ಅನುರಾಧಾ ಭಟ್ ಸುಮಧುರವಾಗಿ ಹಾಡಿದ ಈ ಹಾಡು ಬಹಳ ಇಷ್ಟವಾಯಿತು. ಹಾಡಿಗೆ ತಕ್ಕಂತೆ ಆ ರಂಗಸಜ್ಜಿಕೆ ಮತ್ತು ಕತ್ತಲಲ್ಲಿ ಕಾಣುವ ದೂರದ ಗಿರಿಪಂಕ್ತಿಯ ಮೇಲೆ ಸಾಲಾಗಿ ನಡೆದುಬರುವ ಹೆಂಗಳೆಯರ ಕೈಯ್ಯಲ್ಲಿ ಬೆಳಗುವ ದೀಪಗಳು ಯಾವುದೋ ಯೋಚನಾಲಹರಿಗೆ ಕರೆದೊಯ್ಯುತ್ತವೆ.
ಈ ಹಾಡೊಂದನ್ನೇ ಸದಾ ಗುನುಗುತ್ತಿದ್ದ ನನಗೆ ಎಂದೋ ಓದಿದ್ದ ಕಾದಂಬರಿಯನ್ನು ಮತ್ತೆ ಓದಿದಾಗ ಆ ಹಾಡು ಇನ್ನಷ್ಟು ಇಷ್ಟವಾಗುವುದರ ಜೊತೆಗೆ ರಂಗಮ್ಮ ಹೆಗ್ಗಡತಿಯ ನೋವನ್ನೂ ಪರಿಚಯಿಸುತ್ತಾ ಸಾಗಿತು. ನಾಟಕದಲ್ಲಿ ಆ ಪಾತ್ರದ ಪೂರ್ವಾಪರ ದೀರ್ಘವಾಗಿ ತೋರಿಸದಿದ್ದರೂ, ಕಾದಂಬರಿಯಲ್ಲಿ ಅದು ಬಹಳ ಸುಂದರವಾಗಿ, ವಿವರವಾಗಿ ಬಿತ್ತರವಾಗಿದೆ.
ಕೋಣೂರಿನ ರಂಗಪ್ಪಗೌಡರಿಗೆ ತಂಗಿಯೂ ಮುಕುಂದಯ್ಯನಿಗೆ ಅಕ್ಕನೂ ಆಗಿದ್ದ ರಂಗಮ್ಮ ಅಸಲಿಗೆ ದೊಡ್ಡಣ್ಣ ಹೆಗ್ಗಡೆಯವರನ್ನು ಮದುವೆಯಾದ ಸಂಗತಿಯೇ ಬಹಳ ಸ್ವಾರಸ್ಯಕರ :)

ದೊಡ್ಡಣ್ಣಹೆಗ್ಗಡೆ ಮತ್ತು ರಂಗಪ್ಪಗೌಡರು ಆತ್ಮೀಯ ಸ್ನೇಹಿತರಾಗಿರುತ್ತಾರೆ, ಬೇಟೆಗೆ ಇಬ್ಬರೂ ಒಟ್ಟಿಗೆ ಹೋಗುವ ವಾಡಿಕೆ. ಒಮ್ಮೆ ಬೇಟೆಗೆಂದು ಹೋದಾಗ ಹುಲಿಮರಿಗಳನ್ನು ಕಂಡು ಅದರ ಅಮ್ಮ ಬರುವಷ್ಟರಲ್ಲಿ ಹುಲಿಮರಿಯನ್ನು ಊರಿಗೆ ಕರೆದೊಯ್ದು ಸಾಕುತ್ತೇನೆಂದು ದೊಡ್ಡಣ್ಣಹೆಗ್ಗಡೆ ಹೇಳಲು.,ರಂಗಪ್ಪಗೌಡರು ನೀನು ಹಾಗೆ ಮಾಡಿದರೆ ನೀನೇನು ಕೇಳಿದರೂ ಕೊಡುವೆ ಎಂದು ಷರತ್ತು ಹಾಕಿ ಭಾಷೆ ನೀಡುತ್ತಾರೆ. ದೊಡ್ಡ ಸಾಹಸವೇ ಮಾಡಿ ಹುಲಿಯನ್ನು ಕೊಂದು ಅದರ ಮರಿಯನ್ನು ಊರಿಗೆ ತಂದೇಬಿಡುತ್ತಾರೆ. ಮುಂದೊಂದು ದಿನ ಕೋಣೂರಿನ ಮನೆಯಲ್ಲಿ ಒಂದು ಸಮಾರಂಭಕ್ಕೆ ಬಂದ ದೊಡ್ಡಣ್ಣಹೆಗ್ಗಡೆಯವರು ಊಟಕ್ಕೆ ಕುಳಿತ ಸಮಯದಲ್ಲಿ ಏನು ಕೇಳಿದರೂ ಕೊಡುವೆನೆಂದು ಭಾಷೆ ಕೊಟ್ಟಿದ್ದಲ್ಲ ಎಂದು ಎಲ್ಲರ ಮುಂದೆ ತಮಾಷೆಯಾಗಿ ರಂಗಪ್ಪಗೌಡರನ್ನು ಕೇಳುತ್ತಾರೆ. ಏನು ಕೇಳುತ್ತಾನೋ ಅದೂ ಎಲ್ಲರ ಮುಂದೆ ಎಂದು ರಂಗಪ್ಪಗೌಡರಿಗೆ ದಿಗಿಲಾಗುತ್ತದೆ. ಆದರೆ ದೊಡ್ಡಣ್ಣಹೆಗ್ಗಡೆಯವರು ಅಲ್ಲೇ ಊಟ ಬಡಿಸುತ್ತಿದ್ದ ರಂಗಮ್ಮನ ಕಡೆಗೆ ನೋಟ ಬೀರಿ ರಂಗಪ್ಪಗೌಡರ ಕಿವಿಯಲ್ಲಿ ಏನೋ ಪಿಸುಗುಡುತ್ತಾರೆ. ತನ್ನಾಸೆಯನ್ನೇ ಸ್ನೇಹಿತನೂ ಕೇಳಿದ ಸಂತಸವನ್ನು ರಂಗಪ್ಪಗೌಡರು ಹಿರಿಯರಿಗೆ ತಿಳಿಸಿ ತನ್ನ ತಂಗಿ ರಂಗಮ್ಮ ಮತ್ತು ಆಪ್ತಗೆಳೆಯ ದೊಡ್ಡಣ್ಣಹೆಗ್ಗಡೆಯ ಮದುವೆಯನ್ನು ಅದ್ಧೂರಿಯಾಗಿ ಮಾಡಿಸುತ್ತಾರೆ.

ಸುಖ ದಾಂಪತ್ಯದ ಪ್ರತೀಕವಾಗಿ ಧರ್ಮುವಿನ ಜನನವಾಗುತ್ತದೆ. ಆದರೆ ಮಗುವಿಗೆ ಸೋಂಕು ತಗುಲಿ ಪಂಡಿತರು ಮಗು ಉಳಿಯವುದೇ ಕಷ್ಟವೆಂದಾಗ ದೊಡ್ಡಣ್ಣಹೆಗ್ಗಡೆ ತಿರುಪತಿಗೆ ಹೋಗುವ ಹರಕೆ ಮಾಡಿಕೊಂಡಿರುತ್ತಾರೆ. ಮಗು ಚೇತರಿಸಿಕೊಂಡಮೇಲೆ ತಿರುಪತಿಯ ಹರಕೆ ತೀರಿಸಲು ಹೋದವರು ಎಷ್ಟೋ ವರ್ಷಗಳು ಕಳೆದರೂ ಹಿಂದಿರುಗುವುದಿಲ್ಲ. ರಂಗಮ್ಮ ಹೆಗ್ಗಡತಿ ತಿರುಪತಿಗೆ ಹೋದ ತನ್ನ ಗಂಡನಿಗಾಗಿ ಹಗಲು ರಾತ್ರಿ ಕಾಯುತ್ತಾ ವರ್ಷಗಳೇ ಕಳೆದು ಹೋಗಿ ಅವಳು ಮಾನಸಿಕ ಖಿನ್ನತೆಗೊಳಗಾಗಿರುತ್ತಾಳೆ. ಹೆಗ್ಗಡೆಯೇ ಇಲ್ಲ, ಹೆಗ್ಗಡತಿಗೇನು ಬೆಲೆ ಎಂದು ಮಾತಿನ ಚೂರಿ ಇರಿಯುವ ಊರಿನ ಜನ ಹಾಗೂ ದೊಡ್ಡಮನೆಯ ಅಧಿಕಾರದ ಚುಕ್ಕಾಣಿ ಹಿಡಿಯಬೇಕೆಂಬ ಮಹದಾಸೆ ಹೊಂದಿದ್ದ ಸುಬ್ಬಣ್ಣ ಹೆಗ್ಗಡೆಯವರ ಕಿರಿಯಮಗ ತಿಮ್ಮಪ್ಪ ಹೆಗ್ಗಡೆಯ ಕುತಂತ್ರವೂ ಸೇರಿ ರಂಗಮ್ಮ ಹೆಗ್ಗಡತಿಯನ್ನು 'ಹುಚ್ಚು ಹೆಗ್ಗಡತಿ' ಯ ಪಟ್ಟಕ್ಕೇರಿಸಿರುತ್ತವೆ.

ಹೀಗೆ ಗಂಡನಿದ್ದೂ ವಿಧವೆಯ ಬದುಕು ಹಾಗೂ ಹುಚ್ಚು ಹೆಗ್ಗಡತಿಯ ಪಟ್ಟ ರಂಗಮ್ಮನ ಪ್ರಾಣ ಹಿಂಡುತ್ತಿರುವಾಗ ನಾದಿನಿ ಬುಚ್ಚಿಯೊಬ್ಬಳೇ ರಂಗಮ್ಮನಿಗೆ ದೊಡ್ಡಮನೆಯಲ್ಲಿದ್ದ ಸ್ನೇಹಿತೆ. ರಂಗದ ಮೇಲೆ ಇವರಿಬ್ಬರ ಸಂಬಂಧವು ಚೆನ್ನಾಗಿ ಮೂಡಿಬಂದಿದೆ. ಮಾವನ ಮನೆಯಲ್ಲಿ ಓದುತ್ತಿದ್ದ ಧರ್ಮು ಮನೆಗೆ ಬಂದರೆ ರಂಗಮ್ಮ ಸ್ವಲ್ಪ ಚೇತರಿಸಿಕೊಂಡು ಲವಲವಿಕೆಯಿಂದ ಇರುತ್ತಾಳೆ.  ಆದರೆ ’ಹುಚ್ಚುಹೆಗ್ಗಡತಿ’ ಎಂದು ತನ್ನ ಸ್ವಾರ್ಥಕ್ಕಾಗಿ ತಿಮ್ಮಪ್ಪ ಹೆಗ್ಗಡೆ ಅತ್ತಿಗೆಗೆ ಹೊಡೆದು ಬಡಿದು ಕೋಣೆಯಲ್ಲಿ ಕೂಡಿಹಾಕುತ್ತಾನೆ.

ಎಷ್ಟೋ ವ್ರತಗಳು ಮಾಡಿ, ಎಷ್ಟೋ ದೇವರುಗಳಿಗೆ ಹರಕೆಗಳು ಕಟ್ಟಿದ್ದರೂ ತನ್ನ ಗಂಡ ಬರುವ ಯಾವ ಸೂಚನೆಯೂ ಕಾಣದೆ ಬೇಸತ್ತಿದ್ದರೂ, ಎಲ್ಲೋ ಮನಸ್ಸಿನ ಒಂದು ಮೂಲೆಯಲ್ಲಿ ತನ್ನ ಮನದೊಡೆಯ ಬಂದೇ ಬರುತ್ತಾನೆಂಬ ನಂಬಿಕೆಯಿಂದಲೇ ಅವಳು ದಾರಿ ಕಾಯುತ್ತಿರುತ್ತಾಳೆ.
ಬೆಟ್ಟಳ್ಳಿಯ ತನ್ನ ತಂಗಿಮನೆಗೆ ಕರೆತಂದಾಗ ತಂಗಿಯ ಮಗುವಿನ ಜೊತೆ ಕಾಲ ಕಳೆಯುತ್ತಿದ್ದ ರಂಗಮ್ಮಳ ಬದುಕಿನಲ್ಲಿ ಶುಭ ಸುದ್ದಿಯೊಂದು ಬರುತ್ತದೆ; ಅವಳ ಕನಸು ಕನಿಕರಿಸಿದಂತೆ, ಸುಖವು ಮರುಕಳಿಸಿದಂತೆ; ಆದರೆ ಎಲ್ಲವೂ ಕೆಲವೇ ಕ್ಷಣಗಳು ಮಾತ್ರ.  ತನ್ನ ಗಂಡ ಅಲ್ಲೆಲ್ಲೋ ಜೀವಂತವಾಗಿ ಇದ್ದಾನೆ, ಆದರೆ ಅವನಿಗೆ ಮೊದಲಿನ ಯಾವ ನೆನಪೂ ಇಲ್ಲ ಎಂಬ ಸುದ್ದಿಯನ್ನು ಕೇಳಿ, ಸಂತಸದಿಂದ ಅವನನ್ನು ನೋಡಲು ಮಗ ಧರ್ಮು ಜೊತೆ ಹೋಗುವ ರಂಗಮ್ಮಳನ್ನು ಬರಮಾಡಿಕೊಳ್ಳುವುದು ಖಾಯಿಲೆ ಬಿದ್ದು ಸತ್ತ ಗಂಡನ ಶವ ಮಾತ್ರ!!  ಹೀಗೆ, ರಂಗಮ್ಮಳ ಬಾಳಿನಲ್ಲಿ ನಿಂತು ಹೋಗಿದ್ದ ಗಾಳಿ, ಎತ್ತಲಿಂದಲೋ ಬೀಸಬೇಕಿದ್ದ ತಂಗಾಳಿ, ಒಮ್ಮೆಲೇ ಬಿರುಗಾಳಿಯಾಗಿ ಬಂದು ಬಡಿದು ರಂಗಮ್ಮಳನ್ನೂ ಬಲಿ ತೆಗೆದುಕೊಳ್ಳುತ್ತದೆ. ಗಂಡ ಸತ್ತಿರುವುದನ್ನ ಕಣ್ಣಾರೆ ಕಾಣುವ ರಂಗಮ್ಮಳೂ ಆಘಾತದಿಂದ ಅಲ್ಲಿಯೇ ಕೊನೆಯುಸಿರೆಳೆಯುತ್ತಾಳೆ.  ಅಪ್ಪನ್ನನ್ನು ನೋಡಲು ಬಂದ ಧರ್ಮು ಅವ್ವನನ್ನೂ ಕಳೆದುಕೊಂಡು ಅನಾಥನಾಗುತ್ತಾನೆ.  ಐತ ಹೇಳಿದ ಕತೆಗಳಿಂದ ಧರ್ಮು ಮನಸ್ಸಿನಲ್ಲಿ ಮೂಡಿದ್ದ ಅಪ್ಪನ ಚಿತ್ರ ಕಡೆಗೂ ಚಿತ್ರವಾಗಿಯೇ ಉಳಿಯುತ್ತದೆ.

ರಂಗಮ್ಮಹೆಗ್ಗಡತಿಯ ಸ್ಥಿತಿ ನಗರ-ಹಳ್ಳಿಗಳೆಂಬ ತಾರತಮ್ಯವಿಲ್ಲದೆ ಗಂಡ ದೂರವಿದ್ದರೂ ಗಂಡನಿಲ್ಲದಿದ್ದರೂ ಈ ಕಾಲಕ್ಕೂ ಪ್ರಸ್ತುತ. ಕಾದಂಬರಿ ಓದಿ, ನಾಟಕ ನೋಡಿದ ಮೇಲೆ ಎಲ್ಲಾ ಹೆಣ್ಣುಮಕ್ಕಳೂ ಯಾವುದೋ ಒಂದು ರೀತಿಯಲ್ಲಿ ತಮ್ಮ ಸ್ವಾತಂತ್ರ್ಯವನ್ನು ಅರುಸುತ್ತಾ ಶತಮಾನಗಳಿಂದ ಕಾಯುತ್ತಿರುವ ದಾರಿಗಚ್ಚಿದ ದೀಪಗಳಾಗೆ ಕಂಡರು. ಈ ಎಲ್ಲಾ ಹೆಣ್ಣು ಮಕ್ಕಳ ಮನದ ತಳಮಳವನ್ನ, ನೋವನ್ನ, ಕನಸನ್ನ, ಕೋರಿಕೆಯನ್ನ ಅದ್ಬುತವಾದ ಹಾಡಿನ ಮೂಲಕ ನಮ್ಮ ಮನದಲ್ಲಿ ಬಿತ್ತಿದ ಕೆ.ವೈ.ಎನ್ ಮೇಷ್ಟ್ರಿಗೆ ಸಲಾಂ :)!

ಮಾನಸಯಾನ...

ಕಲ್ಪನಾ ಕನ್ನಡಿಯಲಿ
ಸತ್ಯದ ಬಿಂಬವೋ...
ಸುಳ್ಳಿನ ಮಡಿಲಲ್ಲೇ
ರೋಗಗಳ ತೀವ್ರ ಶೋಧವೋ..
ಯಾವುದೋ ಘಟನೆ..ಜೀವನವೆಲ್ಲಾ ತಪನೆ
ದೈವ-ಭೂತ ಮಂತ್ರ-ತಂತ್ರಗಳ ಸುಳಿಯೊಳಗೆ
ಹುಚ್ಚಾಸ್ಪತ್ರೆಯಲ್ಲಿರದ ವಿಚಿತ್ರ ಹುಚ್ಚು
ಹೊಲಸು ಬಾಯಿಗಳಲ್ಲಿ...
ವಿಷಯಗಳು ತಿರುಗಿ
ಮನಸುಗಳು ಮರುಗಿ
ಸಾವಿರ ಭ್ರೂಣದಂಥ ಕನಸುಗಳ ತದ್ದಿನ:(

ಈಗ ಮನಸ್ಸು ಹೇಗಿದೆ? 
ಎಂಬುದೊಂದೇ ಇಲ್ಲಿ ಪರಮಪ್ರಶ್ನೆ
ಆ ಮನೋಮಯ ಲೋಕದ ಯಾನದಲಿ
ಮೆದುಳಿನ ಮೂರ್ತ ನೆರಳಲ್ಲೇ,
ಅಮೂರ್ತ ಭಾವಗಳ ಒಡನಾಟ
ಐಂದ್ರಜಾಲಿಕ ಡೋಪಮಿನ್ ಸೆರೋಟೊನಿನ್ ಕಣ್ಣಾಮಚ್ಚಾಲೆಯಲಿ
ಅಡಗಿದ್ದ ನಮ್ಮೊಳಗಿನ ಪರಮಾತ್ಮ..
ಒಂಟಿ ಭಾವವೂ ತುಷಾರದಷ್ಟು ಸೂಕ್ಷ್ಮ
ಮನೋರೋಗದ ಅಂತ್ಯಕ್ಕೆ ಕೇಳಿಸದಿರಲಿ ವಿಕಟನುಡಿಗಳ ಅನುರಣನ...
ಪ್ರೀತಿ ಒಂದೇ ಸಾಕು
ಬದುಕ ಬಯಸಲು ಕಾರಣ...!

ನೆನಪಿನ ನಾವೆಯಲ್ಲಿ..

ಎಲ್ಲೋ ಹುಡುಕುತ್ತಿದ್ದೆ ನಿನ್ನ ನೆರಳ
ಪಂಜರದಿಂದ ಹಾರಿ ಸೇರಿದೆವು ಕಡಲ..
ನಿನ್ನ ತೋಳಲಿ ಮಲಗಿ ಕನಸುಗಳಿಲ್ಲದ ಸವಿನಿದ್ರೆ
ದಿಗಂತದಾಚೆಗೂ ಬರುವೆ ನೀ ಕರೆದರೆ..
ನಾಲ್ಕು ದಿನದ ನೆನಪೇ ಕಾಡುತಿದೆ
ಕಂಗಳು ನೀ ಬರುವ ದಾರಿ ಕಾಯುತಿದೆ..
ನೀನಿರದ ಖುಷಿಗಳು ಮನತಣಿಸುತ್ತಿಲ್ಲ..
ಬದುಕಿನ ನೆಮ್ಮದಿ ನೀನೇ ನಲ್ಲ!
ನಿನ್ನ ನೆನಪಿನ ನಾವೆಯಲ್ಲೆ ಸಾಗುತಿರುವೆ..
ಬೇಗ ಬಾ..,ನಮ್ಮಿಬರ ಪ್ರೀತಿಗೇನು ಬರವೆ?