Wednesday, April 29, 2015

ದಾರಿಗಚ್ಚಿದ ದೀಪ ಇವಳು..!ಕೆ.ವೈ.ಎನ್ ಮೇಷ್ಟ್ರು ಬರೆದ ಈ ಸಾಲು ಬಹಳ ದಿನಗಳಿಂದ ನನ್ನನ್ನು ಕಾಡುತಿತ್ತು. ಮೊದಲ ಬಾರಿಗೆ, ೨೦೧೩ ರಲ್ಲಿ ನಾವು ನಮ್ಮ ಅವಿರತ ತಂಡದಿಂದ ಮಲೆಗಳಲ್ಲಿ ಮದುಮಗಳು ನಾಟಕವನ್ನು ನೋಡಲು ಹೋದಾಗ ಕೇಳಿದ ಈ ಹಾಡು, ಹಾಡಿನ ಸಾಲುಗಳು ಇವತ್ತಿಗೂ ನನ್ನನ್ನು ಬಿಡದೆ ಆವರಿಸಿದೆ.

      ಬರುವೆನೆಂದ ನಲ್ಲ...ಬರದೆ ಹೋದನಲ್ಲ...
      ಬೆಂದು ಹಗಲು..ಬೆಂದು ಹಗಲು
      ನೊಂದು ಇರುಳು..ನೊಂದು ಇರುಳು
      ದಾರಿಗಚ್ಚಿದ ದೀಪ ಇವಳು...!
      ಕನಸೇ ಕನಿಕರಿಸು..ಸುಖವೇ ಮರುಕಳಿಸು...
      ಒಮ್ಮೆ ಅವನ ತೋರಿಸು...ಒಮ್ಮೆ ಅವನ ಮರಳಿಸು
      ಗಾಳಿ ಏಕೆ ನಿಂದಿರುವೆ..ಎತ್ತನಿಂದ ಬಂದಿರುವೆ?
      ಏನು ಸುದ್ದಿ ತಂದಿರುವೆ..ನುಡಿ ಬಾರದೆ ತೊದಲಿರುವ
      ದಾರಿಗಚ್ಚಿದ ದೀಪ ಇವಳು....!

ಬರದೆ ಹೋದ ನಲ್ಲನಿಗಾಗಿ ಹಗಲಲ್ಲಿ ಬೆಂದು ಇರುಳಲ್ಲಿ ನೊಂದವಳು ರಂಗಮ್ಮ ಹೆಗ್ಗಡತಿ; ಸುಬ್ಬಣ್ಣ ಹೆಗ್ಗಡೆಯವರ ಹಿರಿಯಮಗ ದೊಡ್ಡಣ್ಣ ಹೆಗ್ಗಡೆಯ ಹೆಂಡತಿ. ನಾಟಕ ನೋಡಿದಾಗ ಗಾಯಕಿ ಅನುರಾಧಾ ಭಟ್ ಸುಮಧುರವಾಗಿ ಹಾಡಿದ ಈ ಹಾಡು ಬಹಳ ಇಷ್ಟವಾಯಿತು. ಹಾಡಿಗೆ ತಕ್ಕಂತೆ ಆ ರಂಗಸಜ್ಜಿಕೆ ಮತ್ತು ಕತ್ತಲಲ್ಲಿ ಕಾಣುವ ದೂರದ ಗಿರಿಪಂಕ್ತಿಯ ಮೇಲೆ ಸಾಲಾಗಿ ನಡೆದುಬರುವ ಹೆಂಗಳೆಯರ ಕೈಯ್ಯಲ್ಲಿ ಬೆಳಗುವ ದೀಪಗಳು ಯಾವುದೋ ಯೋಚನಾಲಹರಿಗೆ ಕರೆದೊಯ್ಯುತ್ತವೆ.
ಈ ಹಾಡೊಂದನ್ನೇ ಸದಾ ಗುನುಗುತ್ತಿದ್ದ ನನಗೆ ಎಂದೋ ಓದಿದ್ದ ಕಾದಂಬರಿಯನ್ನು ಮತ್ತೆ ಓದಿದಾಗ ಆ ಹಾಡು ಇನ್ನಷ್ಟು ಇಷ್ಟವಾಗುವುದರ ಜೊತೆಗೆ ರಂಗಮ್ಮ ಹೆಗ್ಗಡತಿಯ ನೋವನ್ನೂ ಪರಿಚಯಿಸುತ್ತಾ ಸಾಗಿತು. ನಾಟಕದಲ್ಲಿ ಆ ಪಾತ್ರದ ಪೂರ್ವಾಪರ ದೀರ್ಘವಾಗಿ ತೋರಿಸದಿದ್ದರೂ, ಕಾದಂಬರಿಯಲ್ಲಿ ಅದು ಬಹಳ ಸುಂದರವಾಗಿ, ವಿವರವಾಗಿ ಬಿತ್ತರವಾಗಿದೆ.
ಕೋಣೂರಿನ ರಂಗಪ್ಪಗೌಡರಿಗೆ ತಂಗಿಯೂ ಮುಕುಂದಯ್ಯನಿಗೆ ಅಕ್ಕನೂ ಆಗಿದ್ದ ರಂಗಮ್ಮ ಅಸಲಿಗೆ ದೊಡ್ಡಣ್ಣ ಹೆಗ್ಗಡೆಯವರನ್ನು ಮದುವೆಯಾದ ಸಂಗತಿಯೇ ಬಹಳ ಸ್ವಾರಸ್ಯಕರ :)

ದೊಡ್ಡಣ್ಣಹೆಗ್ಗಡೆ ಮತ್ತು ರಂಗಪ್ಪಗೌಡರು ಆತ್ಮೀಯ ಸ್ನೇಹಿತರಾಗಿರುತ್ತಾರೆ, ಬೇಟೆಗೆ ಇಬ್ಬರೂ ಒಟ್ಟಿಗೆ ಹೋಗುವ ವಾಡಿಕೆ. ಒಮ್ಮೆ ಬೇಟೆಗೆಂದು ಹೋದಾಗ ಹುಲಿಮರಿಗಳನ್ನು ಕಂಡು ಅದರ ಅಮ್ಮ ಬರುವಷ್ಟರಲ್ಲಿ ಹುಲಿಮರಿಯನ್ನು ಊರಿಗೆ ಕರೆದೊಯ್ದು ಸಾಕುತ್ತೇನೆಂದು ದೊಡ್ಡಣ್ಣಹೆಗ್ಗಡೆ ಹೇಳಲು.,ರಂಗಪ್ಪಗೌಡರು ನೀನು ಹಾಗೆ ಮಾಡಿದರೆ ನೀನೇನು ಕೇಳಿದರೂ ಕೊಡುವೆ ಎಂದು ಷರತ್ತು ಹಾಕಿ ಭಾಷೆ ನೀಡುತ್ತಾರೆ. ದೊಡ್ಡ ಸಾಹಸವೇ ಮಾಡಿ ಹುಲಿಯನ್ನು ಕೊಂದು ಅದರ ಮರಿಯನ್ನು ಊರಿಗೆ ತಂದೇಬಿಡುತ್ತಾರೆ. ಮುಂದೊಂದು ದಿನ ಕೋಣೂರಿನ ಮನೆಯಲ್ಲಿ ಒಂದು ಸಮಾರಂಭಕ್ಕೆ ಬಂದ ದೊಡ್ಡಣ್ಣಹೆಗ್ಗಡೆಯವರು ಊಟಕ್ಕೆ ಕುಳಿತ ಸಮಯದಲ್ಲಿ ಏನು ಕೇಳಿದರೂ ಕೊಡುವೆನೆಂದು ಭಾಷೆ ಕೊಟ್ಟಿದ್ದಲ್ಲ ಎಂದು ಎಲ್ಲರ ಮುಂದೆ ತಮಾಷೆಯಾಗಿ ರಂಗಪ್ಪಗೌಡರನ್ನು ಕೇಳುತ್ತಾರೆ. ಏನು ಕೇಳುತ್ತಾನೋ ಅದೂ ಎಲ್ಲರ ಮುಂದೆ ಎಂದು ರಂಗಪ್ಪಗೌಡರಿಗೆ ದಿಗಿಲಾಗುತ್ತದೆ. ಆದರೆ ದೊಡ್ಡಣ್ಣಹೆಗ್ಗಡೆಯವರು ಅಲ್ಲೇ ಊಟ ಬಡಿಸುತ್ತಿದ್ದ ರಂಗಮ್ಮನ ಕಡೆಗೆ ನೋಟ ಬೀರಿ ರಂಗಪ್ಪಗೌಡರ ಕಿವಿಯಲ್ಲಿ ಏನೋ ಪಿಸುಗುಡುತ್ತಾರೆ. ತನ್ನಾಸೆಯನ್ನೇ ಸ್ನೇಹಿತನೂ ಕೇಳಿದ ಸಂತಸವನ್ನು ರಂಗಪ್ಪಗೌಡರು ಹಿರಿಯರಿಗೆ ತಿಳಿಸಿ ತನ್ನ ತಂಗಿ ರಂಗಮ್ಮ ಮತ್ತು ಆಪ್ತಗೆಳೆಯ ದೊಡ್ಡಣ್ಣಹೆಗ್ಗಡೆಯ ಮದುವೆಯನ್ನು ಅದ್ಧೂರಿಯಾಗಿ ಮಾಡಿಸುತ್ತಾರೆ.

ಸುಖ ದಾಂಪತ್ಯದ ಪ್ರತೀಕವಾಗಿ ಧರ್ಮುವಿನ ಜನನವಾಗುತ್ತದೆ. ಆದರೆ ಮಗುವಿಗೆ ಸೋಂಕು ತಗುಲಿ ಪಂಡಿತರು ಮಗು ಉಳಿಯವುದೇ ಕಷ್ಟವೆಂದಾಗ ದೊಡ್ಡಣ್ಣಹೆಗ್ಗಡೆ ತಿರುಪತಿಗೆ ಹೋಗುವ ಹರಕೆ ಮಾಡಿಕೊಂಡಿರುತ್ತಾರೆ. ಮಗು ಚೇತರಿಸಿಕೊಂಡಮೇಲೆ ತಿರುಪತಿಯ ಹರಕೆ ತೀರಿಸಲು ಹೋದವರು ಎಷ್ಟೋ ವರ್ಷಗಳು ಕಳೆದರೂ ಹಿಂದಿರುಗುವುದಿಲ್ಲ. ರಂಗಮ್ಮ ಹೆಗ್ಗಡತಿ ತಿರುಪತಿಗೆ ಹೋದ ತನ್ನ ಗಂಡನಿಗಾಗಿ ಹಗಲು ರಾತ್ರಿ ಕಾಯುತ್ತಾ ವರ್ಷಗಳೇ ಕಳೆದು ಹೋಗಿ ಅವಳು ಮಾನಸಿಕ ಖಿನ್ನತೆಗೊಳಗಾಗಿರುತ್ತಾಳೆ. ಹೆಗ್ಗಡೆಯೇ ಇಲ್ಲ, ಹೆಗ್ಗಡತಿಗೇನು ಬೆಲೆ ಎಂದು ಮಾತಿನ ಚೂರಿ ಇರಿಯುವ ಊರಿನ ಜನ ಹಾಗೂ ದೊಡ್ಡಮನೆಯ ಅಧಿಕಾರದ ಚುಕ್ಕಾಣಿ ಹಿಡಿಯಬೇಕೆಂಬ ಮಹದಾಸೆ ಹೊಂದಿದ್ದ ಸುಬ್ಬಣ್ಣ ಹೆಗ್ಗಡೆಯವರ ಕಿರಿಯಮಗ ತಿಮ್ಮಪ್ಪ ಹೆಗ್ಗಡೆಯ ಕುತಂತ್ರವೂ ಸೇರಿ ರಂಗಮ್ಮ ಹೆಗ್ಗಡತಿಯನ್ನು 'ಹುಚ್ಚು ಹೆಗ್ಗಡತಿ' ಯ ಪಟ್ಟಕ್ಕೇರಿಸಿರುತ್ತವೆ.

ಹೀಗೆ ಗಂಡನಿದ್ದೂ ವಿಧವೆಯ ಬದುಕು ಹಾಗೂ ಹುಚ್ಚು ಹೆಗ್ಗಡತಿಯ ಪಟ್ಟ ರಂಗಮ್ಮನ ಪ್ರಾಣ ಹಿಂಡುತ್ತಿರುವಾಗ ನಾದಿನಿ ಬುಚ್ಚಿಯೊಬ್ಬಳೇ ರಂಗಮ್ಮನಿಗೆ ದೊಡ್ಡಮನೆಯಲ್ಲಿದ್ದ ಸ್ನೇಹಿತೆ. ರಂಗದ ಮೇಲೆ ಇವರಿಬ್ಬರ ಸಂಬಂಧವು ಚೆನ್ನಾಗಿ ಮೂಡಿಬಂದಿದೆ. ಮಾವನ ಮನೆಯಲ್ಲಿ ಓದುತ್ತಿದ್ದ ಧರ್ಮು ಮನೆಗೆ ಬಂದರೆ ರಂಗಮ್ಮ ಸ್ವಲ್ಪ ಚೇತರಿಸಿಕೊಂಡು ಲವಲವಿಕೆಯಿಂದ ಇರುತ್ತಾಳೆ.  ಆದರೆ ’ಹುಚ್ಚುಹೆಗ್ಗಡತಿ’ ಎಂದು ತನ್ನ ಸ್ವಾರ್ಥಕ್ಕಾಗಿ ತಿಮ್ಮಪ್ಪ ಹೆಗ್ಗಡೆ ಅತ್ತಿಗೆಗೆ ಹೊಡೆದು ಬಡಿದು ಕೋಣೆಯಲ್ಲಿ ಕೂಡಿಹಾಕುತ್ತಾನೆ.

ಎಷ್ಟೋ ವ್ರತಗಳು ಮಾಡಿ, ಎಷ್ಟೋ ದೇವರುಗಳಿಗೆ ಹರಕೆಗಳು ಕಟ್ಟಿದ್ದರೂ ತನ್ನ ಗಂಡ ಬರುವ ಯಾವ ಸೂಚನೆಯೂ ಕಾಣದೆ ಬೇಸತ್ತಿದ್ದರೂ, ಎಲ್ಲೋ ಮನಸ್ಸಿನ ಒಂದು ಮೂಲೆಯಲ್ಲಿ ತನ್ನ ಮನದೊಡೆಯ ಬಂದೇ ಬರುತ್ತಾನೆಂಬ ನಂಬಿಕೆಯಿಂದಲೇ ಅವಳು ದಾರಿ ಕಾಯುತ್ತಿರುತ್ತಾಳೆ.
ಬೆಟ್ಟಳ್ಳಿಯ ತನ್ನ ತಂಗಿಮನೆಗೆ ಕರೆತಂದಾಗ ತಂಗಿಯ ಮಗುವಿನ ಜೊತೆ ಕಾಲ ಕಳೆಯುತ್ತಿದ್ದ ರಂಗಮ್ಮಳ ಬದುಕಿನಲ್ಲಿ ಶುಭ ಸುದ್ದಿಯೊಂದು ಬರುತ್ತದೆ; ಅವಳ ಕನಸು ಕನಿಕರಿಸಿದಂತೆ, ಸುಖವು ಮರುಕಳಿಸಿದಂತೆ; ಆದರೆ ಎಲ್ಲವೂ ಕೆಲವೇ ಕ್ಷಣಗಳು ಮಾತ್ರ.  ತನ್ನ ಗಂಡ ಅಲ್ಲೆಲ್ಲೋ ಜೀವಂತವಾಗಿ ಇದ್ದಾನೆ, ಆದರೆ ಅವನಿಗೆ ಮೊದಲಿನ ಯಾವ ನೆನಪೂ ಇಲ್ಲ ಎಂಬ ಸುದ್ದಿಯನ್ನು ಕೇಳಿ, ಸಂತಸದಿಂದ ಅವನನ್ನು ನೋಡಲು ಮಗ ಧರ್ಮು ಜೊತೆ ಹೋಗುವ ರಂಗಮ್ಮಳನ್ನು ಬರಮಾಡಿಕೊಳ್ಳುವುದು ಖಾಯಿಲೆ ಬಿದ್ದು ಸತ್ತ ಗಂಡನ ಶವ ಮಾತ್ರ!!  ಹೀಗೆ, ರಂಗಮ್ಮಳ ಬಾಳಿನಲ್ಲಿ ನಿಂತು ಹೋಗಿದ್ದ ಗಾಳಿ, ಎತ್ತಲಿಂದಲೋ ಬೀಸಬೇಕಿದ್ದ ತಂಗಾಳಿ, ಒಮ್ಮೆಲೇ ಬಿರುಗಾಳಿಯಾಗಿ ಬಂದು ಬಡಿದು ರಂಗಮ್ಮಳನ್ನೂ ಬಲಿ ತೆಗೆದುಕೊಳ್ಳುತ್ತದೆ. ಗಂಡ ಸತ್ತಿರುವುದನ್ನ ಕಣ್ಣಾರೆ ಕಾಣುವ ರಂಗಮ್ಮಳೂ ಆಘಾತದಿಂದ ಅಲ್ಲಿಯೇ ಕೊನೆಯುಸಿರೆಳೆಯುತ್ತಾಳೆ.  ಅಪ್ಪನ್ನನ್ನು ನೋಡಲು ಬಂದ ಧರ್ಮು ಅವ್ವನನ್ನೂ ಕಳೆದುಕೊಂಡು ಅನಾಥನಾಗುತ್ತಾನೆ.  ಐತ ಹೇಳಿದ ಕತೆಗಳಿಂದ ಧರ್ಮು ಮನಸ್ಸಿನಲ್ಲಿ ಮೂಡಿದ್ದ ಅಪ್ಪನ ಚಿತ್ರ ಕಡೆಗೂ ಚಿತ್ರವಾಗಿಯೇ ಉಳಿಯುತ್ತದೆ.

ರಂಗಮ್ಮಹೆಗ್ಗಡತಿಯ ಸ್ಥಿತಿ ನಗರ-ಹಳ್ಳಿಗಳೆಂಬ ತಾರತಮ್ಯವಿಲ್ಲದೆ ಗಂಡ ದೂರವಿದ್ದರೂ ಗಂಡನಿಲ್ಲದಿದ್ದರೂ ಈ ಕಾಲಕ್ಕೂ ಪ್ರಸ್ತುತ. ಕಾದಂಬರಿ ಓದಿ, ನಾಟಕ ನೋಡಿದ ಮೇಲೆ ಎಲ್ಲಾ ಹೆಣ್ಣುಮಕ್ಕಳೂ ಯಾವುದೋ ಒಂದು ರೀತಿಯಲ್ಲಿ ತಮ್ಮ ಸ್ವಾತಂತ್ರ್ಯವನ್ನು ಅರುಸುತ್ತಾ ಶತಮಾನಗಳಿಂದ ಕಾಯುತ್ತಿರುವ ದಾರಿಗಚ್ಚಿದ ದೀಪಗಳಾಗೆ ಕಂಡರು. ಈ ಎಲ್ಲಾ ಹೆಣ್ಣು ಮಕ್ಕಳ ಮನದ ತಳಮಳವನ್ನ, ನೋವನ್ನ, ಕನಸನ್ನ, ಕೋರಿಕೆಯನ್ನ ಅದ್ಬುತವಾದ ಹಾಡಿನ ಮೂಲಕ ನಮ್ಮ ಮನದಲ್ಲಿ ಬಿತ್ತಿದ ಕೆ.ವೈ.ಎನ್ ಮೇಷ್ಟ್ರಿಗೆ ಸಲಾಂ :)!

No comments:

Post a Comment