Wednesday, April 29, 2015

OBG ನೈಟ್ ಡ್ಯೂಟಿಯಲ್ಲಿ..

ಹುಣ್ಣಿಮೆ ರಾತ್ರಿಯಲ್ಲೊಂದು
ಹಸುಗೂಸು ಅಳುವ ಸದ್ದು..
ಹೆರಿಗೆ ಕೋಣೆಯಲ್ಲಿ ಇನ್ನಾರಿಗೂ ಕೇಳಿಸದ ಮಾತು
ನೋವಿನಲ್ಲಿದ್ದ ತಾಯಿಗೆ ಕೇಳುತಿತ್ತು..!

"ಇನ್ನೆಷ್ಟು ಹೊತ್ತು ಈ ಯಾತನೆ ನಿನಗೆ?
ನಿನ್ನ ನೆಮ್ಮದಿಯ ಮಡಿಲು ಸೇರುವ ತವಕ ನನಗೆ!
ನನ್ನಮ್ಮನ ತಾಯ್ತನ ಸಿರಿಗೆ ನಿನ್ನಮ್ಮ ಬರಲಿಲ್ಲವೇಕೆ?
ನೀನು ಅಪ್ಪ...ಅಜ್ಜಿಗೆ ತಿಳಿಸಲಿಲ್ಲವೇಕೆ?
ಈ ಬೇನೆಯಲಿ ನಿನಗೆ ಹಸಿವಿನ ಪರಿವೇ ಇಲ್ಲ..
ನರ್ಸ್ ಆಂಟಿ ತಂದ ಬಾಟಲಿಗಳು..
ಡಾಕ್ಟ್ರಮ್ಮ ಚುಚ್ಚಿದ ಸೂಜಿಮದ್ದುಗಳೂ...
ಒಂದು ರಾತ್ರಿಯಲಿ ಎಷ್ಟೆಲ್ಲಾ ನೋವು..
ನಿನ್ನ ಒಂದೊಂದು ಕಣ್ಣ ಹನಿಗೂ 
ನನ್ನ ಉಸಿರಾಟ ಕ್ಷೀಣಿಸುತ್ತಿದೆ...

ಈ ಪುಟ್ಟ ಹೃದಯದ ನೂರಾರು ಬಡಿತದಲ್ಲು
ಹೊರಬಂದು ನಿನ್ನ ನೋಡುವ ಆತುರವಿದೆ...
ಚಿಂತೆ ಬೇಡಮ್ಮ..ನೀ ಕೊಟ್ಟ ಜೀವವಿದು
ನೀ ಪ್ರೀತಿಯ ಹಾಲುಣಿಸುವಾಗ.,
ನಿನಗೆ ಸಾಂತ್ವನ ಹೇಳುವೆ..ನಿನ್ನ ಬದುಕ ಬೆಳಕಾಗುವೆ!

                                                                          ಚಿತ್ರಕೃಪೆ: ಮದನ್ ಸಿ.ಪಿ

Friday, November 16, 2012

ಜೋ....ಗ!







ನಿನ್ನ ನೆನೆದಾಗಲೆಲ್ಲಾ ಏನೋ ಸಂತಸ
ನಿನ್ನೆಂದು ಕಣ್ಣಾರೆ ನೋಡುವೆನೋ ಎಂದೆನಿಸುತ್ತಿತ್ತು...
ಈ ಮನ ಹಕ್ಕಿಯಂತೆ ಹಾರಿ ನಿನ್ನ ಜಡೆಯೇರಿ ಕೂತಂತೆ...
ನಿನ್ನ ಹೆಸರು ಕೇಳಿದರೆ ಸಾಕೇ ಗೆಳತಿ .,ನಿಲುಕದು ಈ ನಾಚಿಕೆ
ಹೇಗೋ ನಾ ಹೊರಟಿದ್ದೆ ನಿನ್ನ ತವರಿಗೆ ,
ನಿನ್ನ ನೋಡಲೇಬೇಕೆಂಬ ತವಕ ನನಗೆ..!
ದಾರಿಯಲ್ಲಿ ಬರೀ ನಿನದೇ ನೆನಪು..
ಕಣ್ತುಂಬಿಕೊಳ್ಳಬೇಕೆಂದು ಮುಸ್ಸಂಜೆಯ ನಿನ್ನ ಹೊನಪು..!
ಕಾಯುತ್ತಿದ್ದೆ....ಕಾಯುತ್ತಲೇ ಇದ್ದೆ...ಬಂದೇ ಬಿಟ್ಟೆ ನಿನ್ನ ಮನೆಗೆ.
ಓಡೋಡಿ ಬಂದೆ..ನೀ ಭೋರ್ಗರೆದು ಹರಿಯುತ್ತಿದ್ದೆ...!
ಬೇಸರವಾಯಿತು ನನಗೆ ...ಕಾರಣ ಕಗ್ಗತ್ತಲೆ.
ನಿನ್ನ ನೋಟ ಸಿಗದೇ..ಜೋಗದಲ್ಲಿ ಒಂದು ರಾತ್ರಿ ಕಳೆದೆ...
ನಿನ್ನ ನೋಡುವ ಆಸೆಯೇ ನನ್ನ ನಿದ್ರೆಯ ನುಂಗಿತ್ತು.,
ಲಾಲಿಯಂತೆ ನೀ ನಗುವ ಸದ್ದು...ಕಿಟಕಿಯಿಂದ ಇಣುಕಿದೆ ನಾ ಕದ್ದು ಕದ್ದು..!
ಕೊನೆಗೂ ಬೆಳಕಾಯಿತು!!
ಜೀವನದ ಅತಿಸುಂದರ ಮುಂಜಾನೆ ಅದಾಗಿತ್ತು...
ಹೊಸಮನೆಯಲಿ ನೊರೆ ಹಾಲು ಉಕ್ಕಿದಂತೆ ಕಣ್ಣಾಡಿಸಿದಂತೆಲ್ಲಾ ನಿನ್ನ ಸಿರಿ!
ಇನೊಂದು ಕಡೆಯಿಂದ ನಾಲ್ಕೆಳೆಯಾಗಿ ನಿನ್ನ ಕೂದಲ ನೀ ಒಣಹಾಕಿದಂತೆ.....
ಎತ್ತಲಿಂದ ನೋಡಿದರೂ ಎಂಥ ಚೆಂದ ಈ ನಿನ್ನ ಅಂದ..
ದಿನಕ್ಕೆ ಸಾವಿರಾರು ಮಂದಿ ಬಂದು ನಿನ್ನ ನೋಡಲು ..
ಹೆಣ್ಣು ನೋಡ ಹೋದಾಗ ಅವಳು ನಾಚಿದಂತೆ..,
ಆಗೊಮ್ಮೆ ಈಗೊಮ್ಮೆ ನಿನ್ನನ್ನು ಮಂಜು ಮುಸುಕಲು..!!
ಹಾಗೆ ಸುಮ್ಮನೆ ನಿಂತುಬಿಟ್ಟೆನು ಕೈಕಟ್ಟಿ...
ಓ ಜೋಗತಿ ...ನಿನಗೆ ನೀನೆ ಸಾಟಿ!!!

Sunday, September 30, 2012

ಮಾಗಿ ಮಾತು..



 ಏಕೀ ಕೋಪ...ಮಾಗಿಯ ತಂಪಲ್ಲಿ ಮಾತಿನ ತಾಪ..?
ಬಾಳ ದಾರಿಯಲಿ ಬೀಸುತಿಹುದು ಪ್ರೀತಿಯ ತಂಗಾಳಿ...
ಎಂದೂ ಬಾರದಿರಲಿ ಕೋಪದ ಬಿರುಗಾಳಿ..!
ನಾ ನಿನಗೆ ನೀ ನನಗೆ ಎಂದಿರುವ ಸುವ್ವಾಲಿ..
ಪ್ರೀತಿಯ ತೊಟ್ಟಿಲಲಿ ನಂಬಿಕೆಯೂ ನಗುತಿರಲಿ..
ಕೇಳುತಾ ಲಾಲಿ..!
ಎಲ್ಲಾದರು ಇರಲಿ........
ನೀ ನಡೆಯುತಿರೆ ಮುಂದೆ ..ನಾ ಬರಲು ಹಿಂದೆ 
ಪ್ರೀತಿ ಹೂಗಳು ನಗುತಿರಲಿ ಗೆಲುವ ಸಂತಸದಲಿ!!!

BMTC rush ಅಲ್ಲಿ



 ರವಿ ಮುಳುಗಿ ತಂಪಾಗಿ.....
ಬಾನಂಚಲ್ಲಿ ಅರಿಶಿಣ ಕುಂಕುಮವಾಗಿ...
ಹೊನ್ನ ಕಿರಣಗಳು ನನ್ನರಸಲು...
ನಗುವಾಗಿ ಹೊಮ್ಮಿದ ನಿನ್ನ ನೆನಪು 
ಈ ಮುಖದಲಿ..
ನೆನೆನೆನೆದು ಬರೆದೆನು ನಿನ್ನ 
ಈ ಮುಸ್ಸಂಜೆ ಪಯಣದಲಿ..!

Sunday, February 26, 2012

ಅಪ್ಪ...ಕೇಳಿಸ್ತಿದ್ಯಾ...?


 
ಈ ಕಂಗಳಿಗೊಂದು ಮನವಿ....
ಮನಸ್ಸು ಮಲಗಿದ್ದರೂ ..ನೀವು ತೆರೆಯಬೇಡಿ
ಈ ಕನಸು ಮುಗಿಯದಿರಲಿ....

ನನ್ನ ನೆನಪಾಗುತ್ತಿಲ್ಲವೇ.......?
ನೀವು ಕೋಪಿಸಿಕೊಂಡಂತೆ...ಎಲ್ಲೋ ಹೊರಟಂತೆ ....
ನಾನು ನಿಮ್ಮ ಮನ ಒಲಿಸಲು ಬಂದಂತೆ,
ಒಂದು ಕನಸು!

ಅನುದಿನ ಹುಡುಕುತಿವೆ ಈ ಕಂಗಳು ನಿಮ್ಮನ್ನು.....
ನಡೆದು ನಡೆದು..ಪ್ರತಿ ಹೆಜ್ಜೆಗೂ ....ನಿಮ್ಮ ನೆನಪು............,
ನನ್ನನು ಕರೆದೊಯ್ಯಲು ಅಪ್ಪ ಬರಲಿಲ್ಲವೇಕೆ?

ಬೆಳಕು ಹರಿಯಿತು...ಕನಸು ಮುಗಿಯಿತು 
ಕಣ್ ತೆರೆದಂತೆ  ಕಣ್ಣೀರ ಸಾಗರವಾಗಿದೆ................ಈ ಮನ,
ನೀವಿಲ್ಲದ ಮನೆ..
ಎಂದಿನಂತೆ ಹೊಸದಿನ ..ಆದರೂ ನಿಲ್ಲದು ಮನದಲಿ ಈ ಆಕ್ರಂದನ......


                                                      ಇಂತಿ..
                                                                                          ನಿಮ್ಮ ಪ್ರೀತಿಯ ಮಗಳು..